ಮಧ್ಯಕಾಲೀನ ಭಾರತದ ಇತಿಹಾಸ - ಪೇಳ್ವೆಗಳು


ಬಾಲಾಜಿ ವಿಶ್ವನಾಥ (ಸಾ.ಶ.1713-1720) : ಶಾಹುನ ಸೇನಾಪತಿಯಾಗಿ ಪ್ರಸಿದ್ಧಿಯನ್ನು ಪಡೆದ ಇವನು ಮರಾಠ ನಾಯಕನಾಗಿ ರೂಪಗೊಂಡನು. ನಿಷ್ಠೆ ಹಾಗೂ ಸಾಮರ್ಥ್ಯವನ್ನು ಗುರುತಿಸಿ ಬಾಲಾಜಿ ವಿಶ್ವನಾಥನನ್ನು ಪೇಳ್ವೆಯೆಂದು ನೇಮಕ ಮಾಡಲಾಯಿತು. ಈತನು ಶಾಹು ಮತ್ತು ಆತನ ತಾಯಿಯನ್ನು ಮೊಘಲರ ಬಂಧನದಿಂದ ಬಿಡುಗಡೆಗೊಳಿಸುವಲ್ಲಿ ನಿರ್ಣಾಯಕ ಪಾತ್ರವಹಿಸಿದನು. ಮೊಘಲ ಸುಲ್ತಾನ ಸೈಯದ್ ಸಹೋದರ ಸ್ನೇಹವನ್ನು ಸಂಪಾದಿಸಿ, ಶಿವಾಜಿಯ ಅಧೀನದಲ್ಲಿದ್ದು ಮೊಘಲರು ವಶಪಡಿಸಿಕೊಂಡ ಪ್ರದೇಶಗಳಲ್ಲಿನ ಭೂಕಂದಾಯ ಸಂಗ್ರಹಿಸುವ ಅಧಿಕಾರ ಪಡೆದನು. ಮರಾಠ ಒಕ್ಕೂಟದ ಧುರೀಣರಾದ ಭೋನ್ಸ್, ಗಾಯಕವಾಡ, ಹೋಳ್ವರ್, ಸಿಂಧಿಯಾ ಮುಂತಾದವರನ್ನು ಒಂದುಗೂಡಿಸಿ ಮರಾಠರ ಕೀರ್ತಿಯನ್ನು ಪುನಃ ಸ್ಥಾಪಿಸಿದನು.

ಒಂದನೆಯ ಬಾಜೀರಾವ್ (ಸಾ.ಶ. 1720-1740) : ಬಾಲಾಜಿ ವಿಶ್ವನಾಥನ ಮರಣದ ನಂತರ ಆತನ ಹಿರಿಯ ಪುತ್ರನಾದ ಒಂದನೆಯ ಬಾಜೀರಾವ್ ಪೇಳ್ವೆಯಾಗಿ ನೇಮಕಗೊಂಡನು. ಕೇವಲ ಹತ್ತೊಂಬತ್ತು ವರ್ಷದವನಾಗಿದ್ದರೂ ಇವನು ಅಪ್ರತಿಮ ವೀರನಾಗಿದ್ದನು. ಮರಾಠ ರಾಜ್ಯವನ್ನು ಉತ್ತರ ಭಾರತದಲ್ಲಿ ವಿಸ್ತರಿಸಬೇಕೆಂಬ ಉದ್ದೇಶದಿಂದ ಗುಜರಾತ, ಮಾಳ್ವಾಗಳನ್ನು ವಶಪಡಿಸಿಕೊಂಡು ಚೌತ್ ಮತ್ತು ಸರದೇಶಮುಖಿಗಳನ್ನು ಸಂಗ್ರಹಿಸುವ ಅಧಿಕಾರ ಪಡೆದನು. ಕರ್ನಾಟಕದ ಚಿತ್ರದುರ್ಗ, ಶ್ರೀರಂಗಪಟ್ಟಣದ ಮೇಲೆ ದಾಳಿಮಾಡಿದನು. ಬಾಜಿರಾವ್ ಮೊಘಲ ದೊರೆ ವಿರುದ್ಧ ಯುದ್ಧ ಸಾರಿದಾಗ ನಿಜಾಮ್-ಉಲ್ ಮುಲ್ಕ ಮೊಘಲರಿಗೆ ನೆರವು ನೀಡುವ ಉದ್ದೇಶದಿಂದ ತನ್ನ ಸೈನ್ಯದೊಂದಿಗೆ ದೆಹಲಿಗೆ ತೆರಳುವ ಸಂದರ್ಭದಲ್ಲಿ ಭೂಪಾಲ ಬಳಿ ನಡೆದ ಯುದ್ಧದಲ್ಲಿ ಮರಾಠರಿಂದ ಪರಾಭವಗೊಂಡನು. ಇದರಿಂದ ನರ್ಮದ, ಚಂಬಲ್ ನದಿಗಳ ನಡುವಿನ ವಿಶಾಲ ಪ್ರದೇಶ ಹಾಗೂ ಐವತ್ತು ಲಕ್ಷ ರೂಪಾಯಿಗಳು ಯುದ್ಧ ಪರಿಹಾರವಾಗಿ ಬಾಜಿರಾವ್‌ನಿಗೆ ದೊರಕಿತು. ಅಲ್ಲದೆ ಪೋರ್ಚಗೀಸರಿಂದ ಸಾಲಸೆಟ್, ಬೇಸಿನ್ ಮತ್ತು ಸಿದ್ಧಿಗಳಿಂದ ಜಂಜಿರಾ ವಶಪಡಿಸಿಕೊಂಡನು. ಪುಣೆ ಇವನ ಆಡಳಿತದ ಕೇಂದ್ರವಾಯಿತು. ಇದೇ ವೇಳೆಗೆ ಮರಾಠರ ಒಕ್ಕೂಟದಲ್ಲಿದ್ದ ಗ್ವಾಲಿಯರ್‌ನ ಸಿಂಧಿಯಾ, ಇಂಧೋರಿನ ಹೋಲ್ಕರ್, ನಾಗಪುರದ ಭೋನ್ಸ್ ಬರೋಡಾದ ಗಾಯಕ್‌ವಾಡ್ ಇವರು ಪರಸ್ಪರ ಸ್ವತಂತ್ರಗೊಳ್ಳಲು ತಿರ್ಮಾನಿಸಿದರು. ಒಂದನೆಯ ಬಾಜಿರಾವ್ ದಕ್ಷತೆಯಿಂದ ಆಡಳಿತ ನಡೆಸಿದನಲ್ಲದೆ ಮರಾಠ ರಾಜ್ಯದ ಕೀರ್ತಿಯನ್ನು ಪುನಃ ಸ್ಥಾಪಿಸುವಲ್ಲಿ ಯಶಸ್ವಿಯಾದನು. ಇದರಿಂದ ಇವನಿಗೆ ಎರಡನೆಯ ಶಿವಾಜಿಯೆಂದು ಹೆಸರು ಬಂದಿತು.

ಬಾಲಾಜಿ ಬಾಜೀರಾವ್‌ (ಸಾ.ಶ. 1740-1761): ಇವನು ತನ್ನ ಇಪ್ಪತ್ತನೆಯ ವಯಸ್ಸಿನಲ್ಲಿ ಅಧಿಕಾರಕ್ಕೆ ಬಂದಿದ್ದರಿಂದ ಆಡಳಿತದ ಮಾರ್ಗದರ್ಶನಕ್ಕಾಗಿ ಹತ್ತಿರ ಸಂಬಂಧಿ ಸದಾಶಿವ ಬಾವುನನ್ನು ನೇಮಕ ಮಾಡಿಕೊಂಡಿದ್ದನು. ಈತನು ಮರಾಠರ ಘನತೆಯನ್ನು ಹೆಚ್ಚಿಸಲು ಶ್ರಮಿಸಿದನು. ರಾಜ್ಯದ ಆರ್ಥಿಕ ಸ್ಥಿತಿ ಸುಧಾರಿಸಲು ಕ್ರಮ ಕೈಗೊಂಡನು. ಬುಂದೇಲಖಂಡದ ಮೇಲೆ ಮರಾಠರ ಸಾರ್ವಭೌಮತ್ವ ಸ್ಥಾಪಿಸಲು ಸಾ.ಶ. 1742ರಲ್ಲಿ ಹೋಳ್ವರ್ ಮತ್ತು ಸಿಂಧಿಯಾರ ಸೈನ್ಯದೊಂದಿಗೆ ಪ್ರಯಾಣ ಬೆಳಸಿದನು. ಅಫ್ಘಾನಿಸ್ತಾನದಿಂದ ಅಹ್ಮದಷಾ ಅಬ್ದಾಲಿ ಮೊಘಲ ಪ್ರದೇಶದ ಮೇಲೆ ಆಕ್ರಮಣ ಮಾಡಿ ಲಾಹೋರ್, ಮುಲ್ತಾನ, ಕಾಶ್ಮೀರಗಳನ್ನು ವಶಪಡಿಸಿಕೊಂಡನು. ಆಗ ಮೊಘಲದೊರೆ ಸಪ್ಪರಜಂಗ್ ಆಂತರಿಕ ಮತ್ತು ಬಾಹ್ಯದಾಳಿಗೆ ಸಂಬಂಧಿಸಿದಂತೆ ಮರಾಠರೊಂದಿಗೆ ಒಪ್ಪಂದ ಮಾಡಿಕೊಂಡನು. ನಿರೀಕ್ಷಿಸಿದಂತೆ ಅಹ್ಮದಷಾ ಅಬ್ದಾಲಿ ಭಾರತದ ಮೇಲೆ ಆಕ್ರಮಣ ಮಾಡಿದನು. ಬಾಲಾಜಿ ಬಾಜಿರಾವ್ ತನ್ನ ಸೈನ್ಯದೊಂದಿಗೆ ಪಾಣಿಪತ್‌ನಲ್ಲಿ ವೈರಿಗಳೊಂದಿಗೆ ಹೋರಾಡಿ ಪರಾಭವಗೊಂಡನು.

ಒಂದನೆಯ ಮಾಧವ ರಾವ್ : ಬಾಲಾಜಿ ಬಾಜೀರಾವ್‌ನ ಎರಡನೆಯ ಪುತ್ರನಾದ ಇವನು ತಂದೆಯ ಮರಣದ ನಂತರ ಪೇಳ್ವೆಯಾದನು. ಅಪ್ರಾಪ್ತ ಯುವಕನಾಗಿದ್ದರಿಂದ ತನ್ನ ಚಿಕ್ಕಪ್ಪನನ್ನು ರಾಜಪ್ರತಿನಿಧಿಯಾಗಿ ನೇಮಕ ಮಾಡಿಕೊಂಡನು. ಮೂರನೆಯ ಪಾಣಿಪತ್ ಅಪಜಯದ ನಂತರ ಆಶ್ಚರ್ಯಕರ ರೀತಿಯಲ್ಲಿ ಚೇತರಿಸಿಕೊಂಡು ದಕ್ಷಿಣ ಮತ್ತು ಉತ್ತರ ಭಾರತದಲ್ಲಿ ಪ್ರಬಲ ಶಕ್ತಿ ಸ್ಥಾಪಿಸಿದನು. ಪಾಣಿಪತ್ ಸೋಲಿನ ಲಾಭ ಪಡೆದುಕೊಳ್ಳಲು ನಿಜಾಮ ಪ್ರಯತ್ನಿಸಲು ತೀರ್ಮಾನಿಸಿದಾಗ ಅವನನ್ನು ಅಹಮ್ಮದ್‌ನಗರ ಬಳಿ ನಡೆದ ಯುದ್ಧದಲ್ಲಿ ಸೋಲಿಸಿದನು. ಮೈಸೂರಿನ ಹೈದರಾಲಿಯನ್ನು ಸಹ ಸೋಲಿಸಿದನು. ಎರಡನೆಯ ಸಲ ಮೈಸೂರಿನ ಮೇಲೆ ಯುದ್ಧ ಮಾಡಿ ಶ್ರೀರಂಗಪಟ್ಟಣದ ಮೇಲೆ ವಿಜಯ ಸಾಧಿಸಿ ಶಿವಾಜಿ ವಶಪಡಿಸಿಕೊಂಡಿದ್ದ ಪ್ರದೇಶಗಳನ್ನು ಹೈದರ್ ಅಲಿಯಿಂದ ಪಡೆದುಕೊಂಡಿದ್ದಲ್ಲದೆ ಅಪಾರ ಯುದ್ಧ ಪರಿಹಾರ ಹಣವನ್ನು ಪಡೆದನು. ಉತ್ತರಭಾರತದಲ್ಲಿ ರಜಪೂತ, ಜಾಟ ಮತ್ತು ರೋಹಿಲರನ್ನು ಸೋಲಿಸಿದನು. ರಾಜಭ್ರಷ್ಟನಾಗಿ ಅಲೆಯುತ್ತಿದ್ದ ಮೊಘಲ ಚರ್ಕವರ್ತಿ ಎರಡನೆಯ ಷಾ ಆಲಂನನ್ನು ದೆಹಲಿ ಸಿಂಹಾಸನದ ಮೇಲೆ ಕುಳ್ಳಿರಿಸಲು ನೆರವು ನೀಡಿದನು. ಹೀಗೆ ಅಲ್ಪಾವಧಿಯಲ್ಲಿ ಮರಾಠರ ಕೀರ್ತಿಯನ್ನು ಪುನಃ ಸ್ಥಾಪಿಸಿದನು. ಮೂರನೆಯ ಆಂಗ್ಲೋ ಮರಾಠ ಯುದ್ಧದಲ್ಲಿ ಬ್ರಿಟಿಷರು ಮರಾಠರನ್ನು ನಿರ್ಣಾಯಕವಾಗಿ ಸೋಲಿಸಿದ ನಂತರ ಮರಾಠ ಆಡಳಿತಬಹುತೇಕ ಅಂತ್ಯಗೊಂಡಿತು.

0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು