ಹಸಿವು ಮತ್ತು ಆಹಾರ ಭದ್ರತೆ

 

ಬಡತನದ ಬಹುಮುಖ್ಯ ಲಕ್ಷಣವೆಂದರೆ ಹಸಿವು, ಅಂದರೆ ದಿನಂಪ್ರತಿ ಸೂಕ್ತ ಪ್ರಮಾಣದ ಹಾಗೂ ಪೌಷ್ಠಿಕ ಆಹಾರ ದೊರೆಯದೇ ಇರುವುದು, ಆಹಾರ ಪದಾರ್ಥಗಳು ಭೌತಿಕವಾಗಿ ದೊರೆಯದೇ ಇರುವುದು, ಅವು ಲಭ್ಯವಿದ್ದರೂ ಜನರಲ್ಲಿ ಅವುಗಳನ್ನು ಕೊಳ್ಳಲು ಸಮರ್ಪಕ ಆದಾಯ ಇಲ್ಲದಿರುವುದು ಜನರ ಆಹಾರದ ಅಭದ್ರತೆಯನ್ನು ಹೆಚ್ಚಿಸುತ್ತದೆ. ಬಹುತೇಕ ಬಡಜನರು ಅರೆಹೊಟ್ಟೆ ಮತ್ತು ಹಸಿವಿನಿಂದ ಬದುಕಬೇಕಾದ ಸ್ಥಿತಿಯಿದೆ. ಇತ್ತೀಚೆಗೆ ವಿಶ್ವದ ಹಸಿವಿನ ಪ್ರಮಾಣವನ್ನು ಅಳೆಯಲು ಅಂತರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯು (IFPRI) ‘ವಿಶ್ವ ಹಸಿವಿನ ಸೂಚ್ಯಂಕ’ ಎಂಬ ಮಾನದಂಡವನ್ನು ರೂಪಿಸಿ ಪ್ರತಿವರ್ಷ ವಿವಿಧ ದೇಶಗಳಲ್ಲಿರುವ ಹಸಿವಿನ ಪ್ರಮಾಣದ ಅಂದಾಜನ್ನು ಮಾಡುತ್ತದೆ.


ನಿಮಗಿದು ತಿಳಿದಿರಲಿ:

‘ವಿಶ್ವ ಹಸಿವಿನ ಸೂಚ್ಯಂಕ’ದ ರಚನೆ: ಈ ಕೆಳಗಿನ ಆಯಾಮಗಳ ಮೌಲ್ಯಗಳನ್ನು ಒಟ್ಟಗೂಡಿಸಿ ಅದನ್ನು ರಚಿಸಲಾಗುತ್ತದೆ :

. ಅಪೌಷ್ಠಿಕತೆ : ಒಟ್ಟು ಜನಸಂಖ್ಯೆಯಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವವರ ಪ್ರಮಾಣ;

ಮಕ್ಕಳ ಪೋಲು ಪ್ರಮಾಣ : ಎತ್ತರಕ್ಕೆ ತಕ್ಕುದಲ್ಲದ ಕಡಿಮೆ ತೂಕ ಹೊಂದಿದ ಐದು ವರ್ಷಗಳೊಳಗಿನ ಮಕ್ಕಳ ಪ್ರತಿಶತ ಪ್ರಮಾಣ;

. ಕುಬ್ಬ ಮಕ್ಕಳ ಪ್ರಮಾಣ : ವಯಸ್ಸಿಗೆ ತಕ್ಕುದಲ್ಲದ ಕಡಿಮೆ ಎತ್ತರ ಹೊಂದಿದ ಐದು ವರ್ಷಗಳೊಳಗಿನ ಮಕ್ಕಳ ಪ್ರತಿಶತ ಪ್ರಮಾಣ: ಹಾಗೂ

ಮಕ್ಕಳ ಮರಣ ದರ : ಐದು ವರ್ಷಗಳೊಳಗಿನ ಮಕ್ಕಳ ಮರಣ ಪ್ರಮಾಣ.


2015ರ ವಿಶ್ವ ಹಸಿವಿನ ಸೂಚ್ಯಂಕದ ಆಧಾರದ ಮೇಲೆ ತಯಾರಿಸಲಾದ 128 ಗಳ ಪಟ್ಟಿಯಲ್ಲಿ ಹಸಿವಿನ ಸಮಸ್ಯೆ ಎದುರಿಸುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.

ಇತ್ತೀಚಿನ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ ಪ್ರಕಾರ ಭಾರತದಲ್ಲಿ ಸುಮಾರು ಶೇ.79ರಷ್ಟು ಮಕ್ಕಳು ಮತ್ತು ಶೇ.58ರಷ್ಟು ಗರ್ಭಿಣಿ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರಲ್ಲದೇ ಪ್ರತಿ ಇಬ್ಬರು ಮಕ್ಕಳಲ್ಲಿ ಒಂದು ಮಗು ಮತ್ತು ಪ್ರತಿ ಮೂವರು ಮಹಿಳೆಯರಲ್ಲಿ ಒಬ್ಬ ಮಹಿಳೆ ಕಡಿಮೆ ತೂಕ ಹೊಂದಿದ್ದಾರೆ. ವಿಶ್ವದ ಕಡಿಮೆ ತೂಕ ಹೊಂದಿದ ಮಕ್ಕಳಲ್ಲಿ ಶೇ.42ರಷ್ಟು ಮಕ್ಕಳು ಭಾರತದಲ್ಲಿದ್ದಾರೆ. ರಕ್ತಹೀನತೆ ಮತ್ತು ಕಡಿಮೆ ತೂಕ ಹಸಿವಿನ ಅಥವಾ ಆಹಾರದ ಅಲಭ್ಯತೆಯ ಪರಿಣಾಮಗಳಾಗಿವೆ.

ನಾವು ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಬಹುತೇಕ ಸ್ವಾವಲಂಬನೆಯನ್ನು ಸಾಧಿಸಿದ್ದೇವೆ. ಅಂದರೆ ನಮ್ಮ ದೇಶಕ್ಕೆ ಸಾಕಾಗುವಷ್ಟು ಆಹಾರ ಧಾನ್ಯಗಳನ್ನು ನಾವೇ ಉತ್ಪಾದಿಸಿಕೊಳ್ಳುವ ಸಾಮರ್ಥ್ಯ ಪಡೆದಿದ್ದೇವೆ. ಹಾಲಿನ ಉತ್ಪಾದನೆಯಲ್ಲಿ ನಾವು ಪ್ರಪಂಚದಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದೇವೆ. ಹಣ್ಣು ಮತ್ತು ತರಕಾರಿಗಳ ಉತ್ಪಾದನೆಯೂ ಗಣನೀಯವಾಗಿದೆ. ಆದರೂ ಭಾರತದಲ್ಲಿ ಅಧಿಕ ಪ್ರಮಾಣದ ಜನರು ಹಸಿವಿನಿಂದ ಬಳಲುತ್ತಿರುವುದು ಬಹುದೊಡ್ಡ ಸಮಸ್ಯೆಯಾಗಿದೆ. ಜನರಲ್ಲಿ ಆಹಾರ ಕೊಳ್ಳುವ ಶಕ್ತಿ ಇಲ್ಲದಿರುವುದು ಹಾಗೂ ಆಹಾರ ಧಾನ್ಯಗಳ ವಿತರಣೆಯಲ್ಲಿನ ದೋಷಗಳಿಂದಾಗಿ ಈ ಸಮಸ್ಯೆ ಉದ್ಭವಿಸಿದೆ.


ಆಹಾರ ಭದ್ರತೆ

ದೇಶದ ಪ್ರತಿಯೊಬ್ಬರಿಗೂ ಕನಿಷ್ಠ ಪ್ರಮಾಣದ ಆಹಾರವನ್ನು ಅವರು ನೀಡಬಹುದಾದ ಬೆಲೆಗೆ ಮತ್ತು ಅವರು ವಾಸಿಸುವ ಸ್ಥಳದ ಸಮೀಪ ಒದಗಿಸುವುದು ಅತ್ಯಾವಶ್ಯಕ. ಇದನ್ನೇ ನಾವು ಆಹಾರ ಭದ್ರತೆ ಎನ್ನುವುದು. ಆಹಾರ ಭದ್ರತೆ ಒದಗಿಸುವುದು ಒಂದು ಬೆಂಬಲಾತ್ಮಕವಾದ ಕ್ರಮವಾಗಿದ್ದು ಜನರ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಸಹಾಯಕವಾಗುತ್ತದೆ. ಆಹಾರ ಭದ್ರತೆಯು ಈ ಮೂರು ಖಾತರಿಗಳನ್ನು ಒಳಗೊಂಡಿದೆ:

1. ದೇಶದಲ್ಲಿರುವ ಎಲ್ಲ ಜನರಿಗೆ ಸಾಕಾಗುವಷ್ಟು ಆಹಾರ ದೊರಕಿಸುವುದು.

2. ಎಲ್ಲ ಜನರಿಗೂ ಗುಣಮಟ್ಟದ ಆಹಾರವನ್ನು ಕೊಳ್ಳಲು ಸಾಮರ್ಥ್ಯ ಹೆಚ್ಚಿಸುವುದು. 3. ಬಡವರು ಆಹಾರವನ್ನು ಪಡೆಯಲು ಮತ್ತು ಜೀರ್ಣಿಸಿಕೊಳ್ಳಲು ಇರುವ ಅಡೆತಡೆಗಳನ್ನು ನಿವಾರಿಸುವುದು.

ಭಾರತದಲ್ಲಿ ಕೇಂದ್ರ ಹಾಗೂ ವಿವಿಧ ರಾಜ್ಯ ಸರ್ಕಾರಗಳು ಆಹಾರ ಭದ್ರತೆಯನ್ನು ಈ ಎರಡು ಕ್ರಮಗಳ ಮೂಲಕ ಸಾಕಾರಗೊಳಿಸಲು ಪ್ರಯತ್ನಿಸಿವೆ

I. ಕಾಪು ದಾಸ್ತಾನು

2. ಸಾರ್ವಜನಿಕ ವಿತರಣಾ ವ್ಯವಸ್ಥೆ.

ಕಾಪು ದಾಸ್ತಾನು : ಸರ್ಕಾರವು ಪ್ರತಿವರ್ಷ ಮಾರುಕಟ್ಟೆಯಿಂದ ಕನಿಷ್ಠ ಬೆಂಬಲ ಬೆಲೆ ನೀಡಿ ಆಹಾರ ಧಾನ್ಯಗಳನ್ನು ಖರೀದಿಸಿ ದಾಸ್ತಾನು ಮಾಡುತ್ತದೆ. ಇದರ ಸಲುವಾಗಿ 1965ರಲ್ಲಿ ಭಾರತೀಯ ಆಹಾರ ನಿಗಮವನ್ನು ಸ್ಥಾಪಿಸಿ ಅದರ ಮೂಲಕ ಆಹಾರ ಧಾನ್ಯಗಳ ಖರೀದಿ, ಅವುಗಳ ವೈಜ್ಞಾನಿಕ ಸಂಗ್ರಹಣೆಗಾಗಿ ಗೋದಾಮುಗಳ ನಿರ್ಮಾಣ ಕಾರ್ಯ ಕೈಗೊಳ್ಳುತ್ತಿದೆ. ಈ ಪ್ರಕ್ರಿಯೆಯನ್ನು ಕಾಪು ದಾಸ್ತಾನು ಎಂದು ಕರೆಯುತ್ತೇವೆ. ಹೀಗೆ ಸಂಗ್ರಹಿಸಿದ ಧಾನ್ಯಗಳನ್ನು ಜನರಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ವಿತರಿಸಲಾಗುತ್ತದೆ.

ಸಾರ್ವಜನಿಕ ವಿತರಣಾ ವ್ಯವಸ್ಥೆ : ಭಾರತೀಯ ಆಹಾರ ನಿಗಮದ ಮೂಲಕ ಖರೀದಿಸಿದ ಧಾನ್ಯಗಳನ್ನು ಮಾರುಕಟ್ಟೆಯಲ್ಲಿನ ಬೆಲೆಗಳಿಗಿಂತ ಕಡಿಮೆ ಬೆಲೆಗೆ ಸರ್ಕಾರವು ಬಡಜನರಿಗೆ ನ್ಯಾಯ ಬೆಲೆ ಅಂಗಡಿಗಳ ಮೂಲಕ ವಿತರಿಸುತ್ತದೆ. ಇದೇ ಸಾರ್ವಜನಿಕ ವಿತರಣಾ ವ್ಯವಸ್ಥೆ, ಆಹಾರ ಧಾನ್ಯಗಳಲ್ಲದೇ, ಖಾದ್ಯ ತೈಲ, ಸಕ್ಕರೆ, ಸೀಮೆ ಎಣ್ಣೆ ಹಾಗೂ ಇತರ ಅವಶ್ಯಕ ವಸ್ತುಗಳನ್ನು ನ್ಯಾಯ ಬೆಲೆ ಅಂಗಡಿಗಳ ಮೂಲಕ ವಿತರಿಸುವ ಕಾರ್ಯವನ್ನು ಸರ್ಕಾರ ಕೈಗೊಂಡಿದೆ. ಭಾರತದಾದ್ಯಂತ 5 ಲಕ್ಷಕ್ಕೂ ಹೆಚ್ಚು ನ್ಯಾಯ ಬೆಲೆ ಅಂಗಡಿಗಳು 16 ಕೋಟಿಗಿಂತಲೂ ಅಧಿಕ ಕುಟುಂಬಗಳಿಗೆ ಸೇವೆ ಸಲ್ಲಿಸುತ್ತಿವೆ.

ಈ ಸೌಲಭ್ಯಗಳನ್ನು ಪಡೆಯಲು ಪ್ರತಿಯೊಂದು ಕುಟುಂಬವು ಪಡಿತರ ಚೀಟಿ ಹೊಂದುವುದು ಅವಶ್ಯವಿದೆ. ಆರ್ಥಿಕ ಸ್ಥಿತಿ ಆಧರಿಸಿ, ವಿವಿಧ ಬಗೆಯ ಪಡಿತರ ಚೀಟಿಗಳಿದ್ದು ಈ ಚೀಟಿಗಳು ಪ್ರತಿ ಕುಟುಂಬಕ್ಕೆ ನಿರ್ದಿಷ್ಟ ಪಡಿಸಿದ ಆಹಾರ ಧಾನ್ಯ ಹಾಗೂ ಇತರ ವಸ್ತುಗಳ ಪ್ರಮಾಣಕ್ಕೆ ಬಾಧ್ಯಸ್ಥರನ್ನಾಗಿಸುತ್ತದೆ. ಹೀಗೆ ಬಡತನದ ರೇಖೆಯ ಕೆಳಗಿರುವ ಜನರ ಪಡಿತರ ಚೀಟಿಗೆ ಅಧಿಕ ಪ್ರಮಾಣದ ವಸ್ತುಗಳು ಕಡಿಮೆ ಬೆಲೆಗೆ ಅಥವಾ ಉಚಿತವಾಗಿ ಮಾಸಿಕವಾಗಿ ಪೂರೈಸಲಾಗುತ್ತದೆ. ಅತ್ಯಂತ ಬಡ ಜನರಿಗಾಗಿ ಅಂತ್ಯೋದಯ ಅನ್ನ ಯೋಜನೆ ಜಾರಿಯಲ್ಲಿದ್ದು ಅದರಡಿ ಅತ್ಯಂತ ಕಡಿಮೆ ದರಕ್ಕೆ ಆಹಾರ ವಿತರಿಸಲಾಗುತ್ತದೆ. ಇನ್ನುಳಿದ ಕುಟುಂಬಗಳಿಗೂ ನಿಗದಿಪಡಿಸಿದ ಆಹಾರ ಧಾನ್ಯ ಪ್ರಮಾಣವನ್ನು ನೀಡಲಾಗುತ್ತದೆ.

ಅನ್ನ ಭಾಗ್ಯ

2013ರಲ್ಲಿ ಜಾರಿಯಾದ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯೇ ಅನ್ನಭಾಗ್ಯ, ಇದು ಹಸಿವು ಮುಕ್ತ ಕರ್ನಾಟಕದ ಸಾಕಾರದ ಉದ್ದೇಶ ಹೊಂದಿದೆ. ಈ ಯೋಜನೆಯಡಿ ರಾಜ್ಯ ಸರ್ಕಾರವು ಬಡತನ ರೇಖೆ ಕೆಳಗಿರುವ ಕುಟುಂಬಗಳಲ್ಲಿರುವ ಪ್ರತಿ ವ್ಯಕ್ತಿಗೆ 5 ಕಿಲೋ ಆಹಾರ ಧಾನ್ಯಗಳನ್ನು (ಅಕ್ಕಿ ಮತ್ತು ಗೋಧಿ/ಜೋಳ/ ರಾಗಿ) ಉಚಿತವಾಗಿ ಒದಗಿಸುತ್ತಿದೆ. ಇವಲ್ಲದೇ ಪಾಮ್ ಎಣ್ಣೆ, ಅಯೋಡಿನ್‌ಯುಕ್ತ ಉಪ್ಪು ಹಾಗೂ ಸಕ್ಕರೆಯನ್ನು ಅತ್ಯಂತ ಕಡಿಮೆ ಬೆಲೆಗೆ ಒದಗಿಸಲಾಗುತ್ತಿದೆ. ಇದರ ಮೂಲಕ ರಾಜ್ಯದಲ್ಲಿ ಅಪೌಷ್ಠಿಕತೆಯನ್ನು ನಿರ್ಮೂಲನೆ ಮಾಡುವ ಇರಾದೆ ಹೊಂದಿದೆ.

ಆಹಾರ ಭದ್ರತೆಯನ್ನು ವಿಸ್ತ್ರತಗೊಳಿಸಲು ಸರ್ಕಾರವು ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆ (ICDS)ಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಮಕ್ಕಳಲ್ಲಿನ ಹಾಗೂ ಗರ್ಭಿಣಿಯರಲ್ಲಿನ ಅಪೌಷ್ಠಿಕತೆಯನ್ನು ಹೋಗಲಾಡಿಸಲು ಕ್ರಮ ಕೈಗೊಳ್ಳಲಾಗಿದೆ. ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದ ಯೋಜನೆಯನ್ನು ಜಾರಿಗೊಳಿಸಿ ಓದುತ್ತಿರುವ ಎಲ್ಲ ಮಕ್ಕಳಿಗೆ ಹೊಟ್ಟೆ ತುಂಬ ಕನಿಷ್ಠ ಒಂದು ಊಟವನ್ನಾದರೂ ನೀಡುವ ವ್ಯವಸ್ಥೆ ಮಾಡಿದೆ


0 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

Post a Comment (0)

ನವೀನ ಹಳೆಯದು